ಮುರಲೀಧರರಾವ್, ಕಾಸರಗೋಡು
(1924- ). ಭರತನಾಟ್ಯವೆಂಬ ಭಾರತೀಯ ಅಭಿಜಾತ ನೃತ್ಯಪ್ರಕಾರದಲ್ಲಿ ಒಬ್ಬ ಪ್ರಮುಖ ನಾಟ್ಯಾಚಾರ್ಯ, ಗುರು, ಸೃಜನಶೀಲ ನೃತ್ಯಸಂಯೋಜಕ ಮತ್ತು ಗ್ರಂಥಕರ್ತೃ. ವಿಶೇಷವಾಗಿ ಪಂದನಲ್ಲೂರು ಶೈಲಿಯ ದೀಪಧಾರಿ. ಕಲೆಯ ಸಾತ್ತ್ವಿಕ ಅಂಶಗಳ ಮೇಲೆ ಅವಧಾರಣೆ ಹಾಗೂ ಇದರಿಂದ ಒದಗುವ ಮೃದುತ್ವ ಮತ್ತು ಸ್ವಾಸ್ಥ್ಯ ಈ ಶೈಲಿಯ ಲಕ್ಷಣಗಳು. ನೃತ್ತಭಾಗದ (ತಾಳಲಯಾಶ್ರಯಿಯಾದ ಅಂಗವಿನ್ಯಾಸಗಳು) ತೀವ್ರ ಚಟುವಟಿಕೆಗಳಿಗೆ ಅಭಿನಯದ ಬಾಹ್ಯಾಲಂಕರಣವೂ ಭಾವಾಭಿವ್ಯಕ್ತಿಯ  ಆಂತರಿಕ ಹೂರಣವೂ ಸಂಲಗ್ನಿಸಿ ಮೈದಳೆದಿರುವ ಪರಿಪೂರ್ಣ ನೃತ್ಯಪ್ರಕಾರವಿದು. ಇಲ್ಲಿ ಬಣ್ಣಬೆಡಗುಗಳ ಬಿನ್ನಾಣವಿಲ್ಲ, ಅನುಚಿತ ನೃತ್ಯಭಂಗಿಗಳ ಅಸಹ್ಯ ಪ್ರಹಾರವಿಲ್ಲ, ಜನರ ಕೀಳು ಅಭಿರುಚಿಗೆ ತನಿಯೆರೆವ ಮಾದಕತೆ ಖಾತ್ರಿ ಇಲ್ಲ. ಇದೊಂದು ಶಿಲ್ಪವಿಶೇಷ, ಭಕ್ತಿಪಾರಮ್ಯ ಮತ್ತು ಕಲೋತ್ತುಂಗ. ತಂಜಾವೂರಿನ ಪಂದನಲ್ಲೂರಿನಲ್ಲಿ ಘನೀಭವಿಸಿ ಸ್ವಂತ ಅಸ್ತಿತ್ವವನ್ನು ಟಂಕಿಸಿದುದರಿಂದ ಈ ಹೆಸರು. ಇಂದು ಪಂದನಲ್ಲೂರು ಶೈಲಿಯ ಮುಂಚೂಣಿ ಮುಖವಾಣಿಗಳ ಪೈಕಿ ಆಢ್ಯರು ಮುರಲೀಧರರಾಯರು.

ಅಂದು (20ನೆಯ ಶತಮಾನದ ಪೂರ್ವಾರ್ಧ) ಮದ್ರಾಸು ಆಧಿಪತ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಿನಲ್ಲಿ ಜನನ. ತಂದೆ ಪ್ರಾಥಮಿಕ ಶಾಲಾಧ್ಯಾಪಕ. ಚಿಕ್ಕಜ್ಜ ಕೂಡ್ಲು ಯಕ್ಷಗಾನಮೇಳದಲ್ಲಿ ಕಲಾವಿದ. ಹೀಗೆ ಆನುವಂಶಿಕತೆಯೂ ಪರಿಸರವೂ ಮೇಳವಿಸಿ ಬಾಲಕನ ಆಸಕ್ತಿಯನ್ನು ತೀರ ಸಹಜವಾಗಿ ಸಂಗೀತ-ನೃತ್ಯ ಪ್ರಕಾರಗಳತ್ತ ಹೊರಳುವಂತೆ ಪ್ರೇರಿಸಿದುವು. ಆದರೆ 12ರ ಹರೆಯದಲ್ಲೇ ಈತ ಎದುರಿಸಬೇಕಾದ ಜೀವನಕಠೋರತೆ - ತಂದೆಯ  ಅಕಾಲ ಮರಣ - ಈ ಅಣುಗನನ್ನು ವೃತ್ತಿ ಹಿಡಿವ ಸಲುವಾಗಿ ಮಂಗಳೂರಿಗೆ ತಳ್ಳಿತು. ಅಲ್ಲಿ ಇವರು ಗಳಿಕೆ-ಕಲಿಕೆ ಹಾದಿಯಲ್ಲಿ ಮುನ್ನಡೆದರು. ಎಸ್‍ಎಸ್‍ಎಲ್‍ಸಿ ಮುಗಿಸುವ ವೇಳೆಗೆ (1940ರ ದಶಕ) ಜೀವನಕಲೆಯಲ್ಲಿ ಪರಿಣತರಾಗಿದ್ದರು: ಬೆರಳಚ್ಚು, ಶೀಘ್ರಲಿಪಿ, ರೇಖಾಚಿತ್ರಣ, ವರ್ಣಕುಂಚನ, ಛಾಯಾಗ್ರಹಣ, ಗ್ರಂಥವಾಚನ ಇತ್ಯಾದಿ. ಇವರಿಗೆ ಜನ್ಮತಃ ತುಸು ಅಧಿಕ ಆತ್ಮ ಪ್ರತ್ಯಯ. ಹೀಗಾಗಿ ತಾಬೆದಾರಿಕೆಯಲ್ಲಿ ಮತ್ತೆ ಮತ್ತೆ ಘರ್ಷಣೆ. ಒಂದೆಡೆ ನಿಲ್ಲಲಾಗದೆ ಹೊಸ ಹಸುರು ಅರಸಿ ಚೆನ್ನೈ, ಮುಂಬಯಿ ನಗರಗಳಲ್ಲಿ ಅಲೆತ. ಅಶನ, ವಸನ, ವಸತಿಗಳಿಗೆ ತತ್ವಾರವಾದರೂ ಕಲಾಗ್ರಂಥಗಳ ಖರೀದಿ ಮತ್ತು ಅಧ್ಯಯನ ಮಾತ್ರ ಸಮೃದ್ಧ.

	ಮುಂಬಯಿ ವಾಸ್ತವ್ಯದ ದಿನಗಳಂದು (1955-57) ಇವರಿಗೆ ರಾಜನ್‍ಅಯ್ಯರ್ ಎಂಬ ಕಥಕ್ಕಳಿ ನೃತ್ಯಕಲಾವಿದರ ನಿಕಟ ಪರಿಚಯವಾಯಿತು. ಪ್ರಾಯದಲ್ಲಿ ಎರಡು ವರ್ಷ ಹಿರಿಯರಾದ ಇವರು ರಾಯರಿಗೆ ನೃತ್ಯದ ಅಡವುಗಳನ್ನು ಬೋಧಿಸಿದ ಪ್ರಥಮ ಗುರು. ಸುಪ್ತ ಕಲಾಪ್ರತಿಭೆ ವಿಕಸಿಸಲು ಇದೊಂದು ನೆಪ ಮಾತ್ರ. ಗುರು-ಶಿಷ್ಯರ ಸ್ನೇಹ ಗಾಢವಾದಂತೆ ರಾಯರ ಆಹ್ವಾನದ ಮೇರೆಗೆ ಅಯ್ಯರ್ ಮಂಗಳೂರಿಗೆ ತೆರಳಿ ಅಲ್ಲಿ ಇಬ್ಬರೂ ಸೇರಿ ಲಲಿತಕಲಾಕೇಂದ್ರವೆಂಬ ಹೆಸರಿನ ನೂತನ ಕಲಾಶಾಲೆಯನ್ನು ಪ್ರಾರಂಭಿಸಿದರು (1958). ಇದೇ ಅವಧಿಯಲ್ಲಿ ರಾಯರು ಜೀವನಯಾಪನೆಗೆ ವಾಣಿಜ್ಯಕಲೆಯನ್ನು ಅವಲಂಬಿಸಿದ್ದರು. ಶಾರದಾ ಪ್ರೆಸ್ ಮಂಗಳೂರು ಪ್ರಕಟಿಸಿದ ಕನ್ನಡ ಭೂಪಟಗಳನ್ನು (ನವೋದಯ ಸ್ಕೂಲ್ ಅಟ್ಲಾಸ್) ಚಿತ್ರಿಸಿದವರೇ ಇವರು.

	ಮುಂದೆ ನೃತ್ಯಕಲೆಯಲ್ಲಿ ಪರಿಪೂರ್ಣತೆಗಳಿಸಲು ಮುರಲೀಧರರಾಯರು ಪಂದನಲ್ಲೂರು ಶೈಲಿಯ ನ್ಯಾಸಧಾರಿ ನಾಟ್ಯಕಲಾನಿಧಿ ಚೊಕ್ಕಲಿಂಗಮ್ (ಚೆನ್ನೈ) ಅವರಲ್ಲಿಗೆ ಹೋಗಿ ಎರಡು ತಿಂಗಳು ಕಾಲ ಪ್ರಾರಂಭಿಕ ಶಿಕ್ಷಣ ಪಡೆದರು. ಭಾಷೆ ಮತ್ತು ಪ್ರಾಯ ವ್ಯತ್ಯಾಸಗಳ ಕಾರಣವಾಗಿ ಇವರಿಬ್ಬರ ನಡುವೆ ಸುಖಸಂವಹನ ಏರ್ಪಡಲಿಲ್ಲ. ಹೀಗಾಗಿ ಚೊಕ್ಕಲಿಂಗಮ್ ಇವರನ್ನು ತಮ್ಮ ಶಿಷ್ಯ ರಾಜರತ್ನಮ್ ಅವರಲ್ಲಿಗೆ (ಕೊಚ್ಚಿ) ಕಳಿಸಿದರು (1963). ಮಂಗಳೂರಿನಲ್ಲಿ ನೆಲೆ, ತಿಂಗಳಿಗೊಮ್ಮೆ ಕೊಚ್ಚಿಗೆ ಪಯಣಿಸಿ ಕಲಿವ ಕಲೆ -- ಹೀಗೆ ಸಾಗಿತು ಕಲಾಭ್ಯಾಸ. ಅನೇಕ ಸಂದರ್ಭಗಳಲ್ಲಿ ರೇಲ್ವೇ ಪ್ರಯಾಣದ ವೇಳೆಯೇ ಅಭ್ಯಾಸ. ವರ್ಷಕ್ಕೊಮ್ಮೆ ಎರಡು ತಿಂಗಳ ಗುರುಕುಲ ವಾಸ. ಈ ಛಲ ಮತ್ತು ನಿಷ್ಠೆ ಇವರಿಗೆ ಬಲು ಬೇಗ ಪಂದನಲ್ಲೂರು ಶೈಲಿಯ ಅಂತಸ್ಸತ್ತ್ವ ಗ್ರಹಿಸಿ ಅದರಲ್ಲಿ ಪ್ರಾವೀಣ್ಯ ಗಳಿಸಲು ನೆರವಾಯಿತು (1963-67).

	ಯಾವುದೇ ಶೈಲಿಯಲ್ಲಿ ತಂತ್ರ ಮತ್ತು ಸಿದ್ಧಾಂತ (ಣeಛಿhಟಿique, ಣhe ಠಿಡಿಚಿಛಿಣiಛಿಚಿಟ ಚಿsಠಿeಛಿಣ, ಚಿಟಿಜ ಛಿಡಿeಚಿಣiviಣಥಿ, ಣhe ಣheoಡಿeಣiಛಿಚಿಟ ಚಿsಠಿeಛಿಣ) ಎಂಬ ಎರಡು ಭಾಗಗಳಿವೆ. ತಂತ್ರ ಅದರ ಪ್ರದರ್ಶನ ಭಾಗ, ಸಿದ್ಧಾಂತ ಯೋಜನಾ ಭಾಗ. ಇವನ್ನು ಅನುಕ್ರಮವಾಗಿ viಡಿಣuosiಣಥಿ (ಜಡಿiಟಟ) ಚಿಟಿಜ ಛಿಡಿeಚಿಣiviಣಥಿ (ಚಿಡಿಣ) ಎನ್ನುವುದುಂಟು. ಸಿದ್ಧಾಂತ ಬಲಿಷ್ಠವಾಗಿಲ್ಲದಲ್ಲಿ ತಂತ್ರ ಕೇವಲ ಯಾಂತ್ರಿಕ ವರಿಸೆಯಾಗುತ್ತದೆ; ತಂತ್ರ ಸುಪುಷ್ಟವಾಗಿಲ್ಲದಲ್ಲಿ ಸಿದ್ಧಾಂತ ಶುಷ್ಕ ವ್ಯಾಖ್ಯಾನ ಆಗುತ್ತದೆ. ಇವೆರಡರ ಪರಸ್ಪರ ಪೂರಕ ಪೋಷಕ ಮೇಳನವೇ ಉತ್ಕøಷ್ಟ ಕಲೆಯ ಪ್ರಥಮಾವಶ್ಯಕತೆ. ಪಂದನಲ್ಲೂರು ಶೈಲಿಯ ಸೌಕುಮಾರ್ಯದಿಂದ ದೀಪ್ತರಾದ ರಾಯರು ಅದರ ಸೈದ್ಧಾಂತಿಕ ಅಧ್ಯಯನಕ್ಕೆ ಮುಂದಾದರು. ಹೇಗೆ, ಎಲ್ಲಿ, ಯಾರಿಂದ? ಪರಂಪರೆಯ ಸವೆದ ಜಾಡು ನಡೆಯಲ್ಲಿ ಶಿಕ್ಷಣ ಪಡೆದು ತಂತ್ರಕುಶಲಿಗಳಾಗಿದ್ದ ರಾಜರತ್ನಮ್ ತಮ್ಮ ಶಕ್ತ ಮತ್ತು ಆಸಕ್ತ ಶಿಷ್ಯನ ಕಲಾದಾಹ ಶಮನಿಸುವ ಸ್ಥಿತಿಯಲ್ಲಿರಲಿಲ್ಲ. ಸ್ವಾಧ್ಯಾಯನಿರತರಾಗುವುದೊಂದೇ ಶರಣು.

	ಯಾವುದೇ ಕಾಲದಲ್ಲಿಯ ಜೀವಂತ ಜನಾಂಗದ ಚಿಂತನ ಮಂಥನ ಕ್ವಥನಗಳ ಫಲವಾಗಿ ಮೌಲ್ಯಗಳು ಹೆಪ್ಪುಗಟ್ಟುತ್ತವೆ. ಇವು ಸಮಕಾಲೀನ ಉದ್ಭವಗಳಾದರೂ ಸಾರ್ವಕಾಲಿಕ ಅಸ್ತಿತ್ವ ಗಳಿಸಿರುತ್ತವೆ. ಉದಾಹರಣೆಗೆ ಸತ್ಯಂ ವದ ಧರ್ಮಂ ಚರ. ಇಂಥ ಮೌಲ್ಯಗಳ ಮೊತ್ತ ಸಂಸ್ಕøತಿ. ಸಂಸ್ಕøತಿಯ ಪ್ರವಹನ ಪರಂಪರೆ. ಪರಂಪರೆಯ ವರ್ತಮಾನ ಮುಖ ಸಂಪ್ರದಾಯ. ಇಂದಿನ ಸಂಪ್ರದಾಯ ಪುನಃ ಮುಂದಿನ ಪರಂಪರೆಯ ಹರಿಕಾರ. ಎಂದೇ ಈಗ ಸಾವಿರಾರು ವರ್ಷಗಳ ಹಿಂದಿನ ಭಾರತೀಯ ಸಂಸ್ಕøತಿಯನ್ನು ಇಂದಿನದಕ್ಕೆ ಸಂಯೋಜಿಸುವ ಮತ್ತು ಮುಂದಿನದಕ್ಕೆ ಕೊಂಡಿಸುವ ಸೇತುವೆಯೇ ಪರಂಪರೆ. ಆದರೆ ಅಂದಿನ ಸಂಪ್ರದಾಯ ಬೇರೆ, ಇಂದಿನದು ಬೇರೆ, ಅಂತೆಯೇ ಮುಂದಿನದು ಕೂಡ. ಕಲೆ, ವಿಜ್ಞಾನ, ತತ್ತ್ವಶಾಸ್ತ್ರ, ಧರ್ಮ ಯಾವುದೂ ಈ ನಿಯಮಕ್ಕೆ ಅಪವಾದವಲ್ಲ.

	ಭರತನಾಟ್ಯ ಕೇವಲ ಗ್ರಂಥಸ್ಥ ಸ್ಥಗಿತ ಜ್ಞಾನಭಂಡಾರವಲ್ಲ, ರಂಗದಲ್ಲಿ ನಿರಂತರ ಪುನರುಜ್ಜೀವನಗೊಳ್ಳಬೇಕಾದ ಜೀವಂತ ಕಲಾಪ್ರಕಾರ ಎಂಬ  ಅರಿವು ರಾಯರಿಗೆ ಸ್ವತಂತ್ರ ಅನ್ವೇಷಕ ಮಾರ್ಗ ಅನುಸರಿಸಲು ಪ್ರೇರಕವಾಯಿತು. ಹೀಗೆ ಮೂಲಭೂತ ಚಿಂತನೆ ಮತ್ತು ಪ್ರಯೋಗ ಮಾಡುತ್ತ ಮುನ್ನಡೆದಾಗ ಇವರು ಅನೇಕ ನೂತನ ಸ್ವಾರಸ್ಯಕರ ಅಂಶಗಳನ್ನು ಕಂಡುಕೊಂಡರು: ಪರಂಪರೆಯ (?) ಹೆಸರಿನಲ್ಲಿ ಜಡ್ಡುಕಟ್ಟಿದ್ದ ಕುಂಬು ಕಿಲುಬುಗಳ ನಿವಾರಣೆ ಆಗಬೇಕು, ಆಧುನಿಕ ರಂಗಸಜ್ಜಿಕೆಗೂ ನವದೃಷ್ಟಿಯ ರಸಿಕರಿಗೂ ಒಪ್ಪುವಂತೆ ಪ್ರಾಚೀನ ಅಥವಾ ಸ್ಥಗಿತ ಶೈಲಿಗೆ ಮುಖಮಾರ್ಜನೆ ನೀಡಬೇಕು, ಮತ್ತು ಪರಂಪರೆಗೆ ವಿರೋಧವಾಗಿದ್ದು ಅಗ್ಗದ ಮನೋರಂಜನೆ ಒದಗಿಸುವ ಅನ್ಯ ಶೈಲಿಗಳ ಮೂಲೋತ್ಪಾಟನೆ ಸಾಗಿಸಬೇಕು. ಈ ಎಲ್ಲ ಗುಣಲಕ್ಷಣಗಳನ್ನು ಇವರು ತಮ್ಮ ಶೈಲಿಯಲ್ಲಿ ಅಳವಡಿಸಿಕೊಂಡು ಶ್ರೇಷ್ಠ ಗುರುವಾಗಿ ವಿದ್ಯಾರ್ಥಿಗಳ ಕಲಾಭಿವ್ಯಕ್ತಿಗೆ ಹೊಸ ಆಯಾಮ ನೀಡಿದರು, ಇಂದಿಗೂ ನೀಡುತ್ತಿದ್ದಾರೆ.

	ಸಹಜವಾಗಿ ಇವರೊಬ್ಬ ಬಹುಶ್ರುತ -- ಕೇವಲ ಭರತನಾಟ್ಯ ಗ್ರಂಥಸೀಮಿತ ಅಲ್ಲ - ವಿದ್ವಾಂಸ ಆಗಬೇಕಾಯಿತು. ಜ್ಞಾನಗಂಗೋತ್ರಿ ಎಂಬ ಕಿರಿಯರ ವಿಶ್ವಕೋಶಕ್ಕೂ ಕನ್ನಡ ವಿಶ್ವಕೋಶ ಎಂಬ ಪ್ರೌಢರ ವಿಶ್ವಕೋಶಕ್ಕೂ ರೇಖಾಚಿತ್ರಗಳನ್ನು ಬರೆದರು, ನೃತ್ಯಭಂಗಿಗಳನ್ನು ಪ್ರದರ್ಶಿಸುವ ಛಾಯಾಚಿತ್ರಗಳನ್ನು ಸೆರೆಹಿಡಿದರು. ವರ್ಣಚಿತ್ರಗಳನ್ನು ಕುಂಚಿಸಿದರು. ಕಲೆ ಕುರಿತಂತೆ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳನ್ನು ಆಳವಾಗಿ ಅಭ್ಯಸಿಸಿದರು -- ಎಲ್ಲೆಡೆಗಳಿಂದ ಹರಿದು ಬರಲಿ ಜ್ಞಾನ ಎಂಬುದು ಇವರ ನಿಲವು. ರಾಜ್ಯ ಸರ್ಕಾರದ ಪಠ್ಯಪುಸ್ತಕ ರಚನೆಯಲ್ಲಿ ನೃತ್ಯವಿಭಾಗಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮೌಲಿಕ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಇವರ ನೃತ್ಯಸಂಯೋಜನೆ ಮತ್ತು ಪ್ರದರ್ಶನಗಳೆಂದರೆ ಅರ್ವಾಚೀನಮುಕುರದಲ್ಲಿ ಪ್ರಾಚೀನ ವೈಭವದ ಪ್ರತಿಬಿಂಬ ಎನ್ನುವುದು ರಸಿಕರ ಸ್ವಯಂಸ್ಫೂರ್ತ ಉದ್ಗಾರ. ಕಲಿತಿರುವುದು ಕಡಲೇಕಾಳಿನಷ್ಟು, ಕಲಿಯಲು ಉಳಿದಿರುವುದು ಕಡಲಿನಷ್ಟು ಎನ್ನುತ್ತಾರೆ ಈ 81ರ ಜ್ಞಾನವಯೋವೃದ್ಧ!

	ಪಾರಂಪರಿಕ ಶುದ್ಧ ಭರತನಾಟ್ಯಪ್ರದರ್ಶನಗಳ ಜೊತೆಗೆ ಇವರು ನೃತ್ಯಸಂಯೋಜಿಸಿ ಪ್ರದರ್ಶಿಸಿರುವ ಭಕ್ತ ಪುರಂದರದಾಸರ ಜೀವನ ಮತ್ತು ಸಂದೇಶ, ನವರಸರಾಮಾಯಣ, ಶ್ರೀಕೃಷ್ಣಚರಿತ್ರೆ ಮುಂತಾದವು ಸ್ವಾಮಿ ಚಿನ್ಮಯಾನಂದ, ನಾಟ್ಯಕೋವಿದೆ ಬಾಲಸರಸ್ವತಿ, ಹಿಂದೂಸ್ತಾನೀ ಗಾಯಕಿ ಗಂಗೂಬಾಯಿ ಹಾನಗಲ್, ಭರತನಾಟ್ಯಗುರುದಂಪತಿಗಳು ಚಂದ್ರಭಾಗಾದೇವಿ ಮತ್ತು ಯು.ಎಸ್. ಕೃಷ್ಣರಾವ್, ವೇಣುಪಟು ಬಿ.ಎನ್.ಸುರೇಶ್, ಕಥಕ್‍ನೃತ್ಯಗುರು ಮಾಯಾರಾವ್ ಮೊದಲಾದ ಸಿದ್ಧ ಪ್ರಸಿದ್ಧರಿಂದ ಪ್ರಶಂಸೆ ಪಡೆದಿವೆ.

	ಈ ಕಲಾತಪಸ್ವಿ ಮನೆಮಾಡಲಿಲ್ಲ, ಸಂಸಾರಹೂಡಲಿಲ್ಲ, ನಿಧಿಸಂಚಯಿಸಲಿಲ್ಲ, ಕೀರ್ತಿ ಪ್ರಚಾರ ಕ್ಷಿಪ್ರಯಶಸ್ಸುಗಳಿಗೆ ಆಶೆಪಡಲಿಲ್ಲ - ನಿಜಕ್ಕೂ ಅನಿಕೇತನ ಎಂದರೆ ಇವರೇ. ಪ್ರಪಂಚಾದ್ಯಂತ ಇವರ ಶಿಷ್ಯ ಶಿಷ್ಯೆಯರ ಬಳಗವಿದೆ. ¥sóÁ್ರನ್ಸಿನಿಂದ ಬಂದು ಇವರಿಂದ ಭರತನಾಟ್ಯ ಕಲಿತು ಮೈಸೂರಿನ ನಿಷ್ಠುರ ನಿಕಷದಲ್ಲಿ ಉತ್ತಮ ವೃತ್ತಿಕಲಾವಿದೆ ಎಂಬ ಹೆಸರು ಗಳಿಸಿರುವ ಕಾಟಿಯಾ ಲೆಜೇರೇ (ಈಕೆಯ ಭಾರತೀಯ ನಾಮ ಮನೋಚ್ಛಾಯಾ), ಅಂತಾರಾಷ್ಟ್ರೀಯ ಖ್ಯಾತಿಯ ವಸುಂಧರಾದೊರೆಸ್ವಾಮಿ, ನಂದಿನೀರಂಗನ್, ವಾಣಿರಮೇಶ್, ಕೆ ರಾಮಮೂರ್ತಿರಾವ್, ಕೃಪಾಫಡ್ಕೆ, ಶಾರದಾಮಣಿ ಶೇಖರ್, ಶ್ರೀವಿದ್ಯಾ ಮೊದಲಾದವರು ರಾಯರ ಗರಡಿಯಲ್ಲಿ ಉತ್ತೀರ್ಣರಾಗಿರುವ ನೃತ್ಯಕೋವಿದರು ಹಾಗೂ ಸಂಯೋಜಕರು. ಎಂಬತ್ತೊಂದರ ಈ ಇಳಿವಯಸ್ಸಿನಲ್ಲಿಯೂ ಮುರಲೀಧರರಾಯರು ತಮ್ಮ ಬಳಿಗೆ ಬಂದವರಿಗೆ ಮುಕ್ತ ಮನದಿಂದ ಕಲಾದಾನ ಮಾಡುತ್ತಿರುವರು. ಈಗ (2005) ಮಂಗಳೂರಿನಲ್ಲಿ ಬಾಡಿಗೆಯ ಬಿಡಾರದಲ್ಲಿ ವಾಸ.

	ಶ್ರೀಯುತರ ತಪಸ್ಸ್ವಾಧ್ಯಾಯಗಳ ಪಕ್ವಫಲ 1998ರಲ್ಲಿ ಪ್ರಕಟವಾದ ನೃತ್ಯಲೋಕವೆಂಬ ಭವ್ಯ ಸಚಿತ್ರ ಆಕರ ಗ್ರಂಥ (528 ಪುಟಗಳು, 345 ರೇಖಾಚಿತ್ರಗಳು ಮತ್ತು 63 ಛಾಯಾಚಿತ್ರಗಳು; ಪ್ರಕಾಶಕರು: ಅತ್ರಿ ಬುಕ್ ಸೆಂಟರ್, ಮಂಗಳೂರು). ಇವರನ್ನು ಅರಸಿ ಬಂದಿರುವ ಪ್ರಶಸ್ತಿ ಪುರಸ್ಕಾರಗಳು ಅಸಂಖ್ಯ. ಮುಖ್ಯವಾದ ಕೆಲವು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 1989-90ರ ಗೌರವ ಪ್ರಶಸ್ತಿ ಮತ್ತು `ಕರ್ನಾಟಕ ಕಲಾತಿಲಕ ಬಿರುದು ಪ್ರದಾನ; ಕರ್ನಾಟಕ ಸರ್ಕಾರ ನೀಡಿದ 2000 ಸಾಲಿನ ಶಾಂತಲಾ ನಾಟ್ಯ ಪ್ರಶಸ್ತಿ; ಎಲ್ಲಕ್ಕಿಂತಲೂ ನಾಡಿನಾದ್ಯಂತ ಪಂಡಿತ ಪಾಮರರು ಎದೆತುಂಬಿ ಹಾಡುವ ಪಲ್ಲವಿ ನಾಟ್ಯಾಚಾರ್ಯರೆಂದರೆ ನಮ್ಮ ಮುರಲೀಧರರಾಯರಯ್ಯ!
								(ಜಿ.ಟಿ.ನಾರಾಯಣರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ